ಮನುಜ ಮತ ವಿಶ್ವಪಥ-ಕನ್ನಡವೇ ಸತ್ಯ
ಕನ್ನಡ ನಾಡು ಕಂಡ ಮಹಾನ್ ಕವಿ-ದಾರ್ಶನಿಕ, ಕನ್ನಡಕ್ಕೆ ಪ್ರಪ್ರಥಮ ಜ್ನಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮಹಾನ್ ಚೇತನ ರಾಷ್ಟ್ರಕವಿ ಕುವೆಂಪು ಹಾಗೂ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮ ಕಂಚಿನ ಕಂಠ ದಿಂದ ಹಾಗೂ ಸಂಗೀತ ನಿರ್ದೇಶನದಿಂದ "ಕನ್ನಡವೇ ಸತ್ಯ" ಎಂಬ ಕುವೆಂಪುರವರ ವಾಣಿಯನ್ನು ಮನೆ-ಮನೆಗೆ ಮನ-ಮನಕ್ಕೆ ತಲುಪಿಸಿದ ಕನ್ನಡದ ಕಣ್ಮಣಿ ಗಾಯಕ, ಸಂಗೀತ ನಿರ್ದೇಶಕ ಡಾ|| ಸಿ.ಅಶ್ವಥ್ ರವರ ಜನ್ಮದಿನ ಡಿಸೆಂಬರ್ ೨೯.
ಕಾಕತಾಳೀಯವೆಂಬಂತೆ ಈ ಇಬ್ಬರೂ ಮಹನೀಯರ ಹುಟ್ಟಿದ ದಿನವೂ ಒಂದೇ ಆಗಿದ್ದು, ಇದೇ ಪ್ರಪ್ರಥಮ ಬಾರಿಗೆ ಡಿಸೆಂಬರ್ ೨೯, ೨೦೧೧ ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ "ಮನುಜ ಮತ ವಿಶ್ವಪಥ-ಕನ್ನಡವೇ ಸತ್ಯ" ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ರಾಜ್ಯದ ಮೂಲೆಮೂಲೆಗಳಿಂದ ಗಾಯಕ ಗಾಯಕಿಯರು ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಬಂದು ಡಾ||ಸಿ.ಅಶ್ವಥ್ ರವರ ಸ್ವರ ಸಂಯೊಜನೆಯ ರಾಷ್ಟ್ರಕವಿ ಕುವೆಂಪುರವರ ಕವಿತೆಗಳ ಗಾಯನ ಗೌರವ ಸಲ್ಲಿಸಲಿದ್ದು, ನಾಡಿನ ಪ್ರಖ್ಯಾತ ಕಲಾವಿದರಾದ ಡಾ|| ಶಿವಮೊಗ್ಗ ಸುಬ್ಬಣ್ಣ, ವ್ಯೆ.ಕೆ.ಮುದ್ದುಕೄಷ್ಣ, ಕಿಕ್ಕೇರಿ ಕೃಷ್ಣಮೂರ್ತಿ, ರಘು ದೀಕ್ಷಿತ್, ರಾಜೇಶ್ ಕೃಷ್ಣನ್, ಬಿ.ಕೆ.ಸುಮಿತ್ರ, ಕಸ್ತೂರಿ ಶ್ಂಕರ್, ಮುದ್ದುಮೋಹನ್, ಪುತ್ತೂರು ನರಸಿಂಹ ನಾಯಕ್, ರಮೇಶ್ಚ್ಂದ್ರ, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮಾ, ಸಂಗೀತಾ ಕಟ್ಟಿ, ಬಿ.ಆರ್.ಛಾಯಾ, ಎಂ.ಡಿ.ಪಲ್ಲವಿ, ಜೋಗಿ ಸುನೀತ, ಎಸ್.ಸುರೇಖಾ, ನಾಗಚಂದ್ರಿಕಾ ಭಟ್, ಪಿ.ಎ.ಮಂಗಳ,ವೃಂದಾ ರಾವ್, ವೈಷ್ಣವ ರಾವ್, ಪಿ. ಶಿವಶಂಕರ್, ಪಿ.ಎನ್.ಜಯರಾಮ್, ಅವರುಗಳ ಜೊತೆ ಅಂತಾರಾಷ್ಟ್ರೀಯ ವಾದ್ಯ ಕಲಾವಿದರುಗಳಾದ ಶ್ರೀ ವೇಣುಗೋಪಾಲರಾಜು, ಮ್ಯಾಣ್ಡೊಲಿನ್ ಮಾಂತ್ರಿಕ ಎನ್.ಎಸ್.ಪ್ರಸಾದ್, ಬಿ.ವಿ.ಶ್ರೀನಿವಾಸ್,ಪ್ರವೀಣ್ ಡಿ.ರಾವ್, ರಿದಂ ಕಿಂಗ್ ಡ್ರಮ್ಸ್ ದೇವಾ, ಖ್ಯಾತ ಗಿಟಾರ್ ವಾದಕರಾದ ಮೈಸೂರು ಗೋಪಿ, ಮೈಸೂರು ಸುದರ್ಶನ್ ಮುಂತಾದ ಕಲಾವಿದರು ಸೇರಿ ಒಟ್ಟು ೬೦ಕ್ಕೂ ಹೆಚ್ಚು ವಾದ್ಯ ಕಲಾವಿದರು ಸಹಕರಿಸುತ್ತಿದ್ದು, ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ನೃತ್ಯ ತಂಡಗಳಿಂದ ಕುವೆಂಪು ಗೀತೆಗಳಿಗೆ ನೃತ್ಯ ಪ್ರದರ್ಶನ, ಮೂಲ ಜಾನಪದ ತಂಡಗಳಿಂದ ಜಾನಪದ ನೃತ್ಯ, ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕುವೆಂಪುರವರ ಒಡನಾಡಿ ಹಿರಿಯರಿಗೆ ಹಾಗೂ ಡಾ||ಸಿ.ಅಶ್ವಥ್ ರವರ ಒಡನಾಡಿಗಳಿಗೆ ಗೌರವ ಸಮರ್ಪಣೆ, ರಾಷ್ಟ್ರಕವಿ ಕುವೆಂಪು ಹಾಗೂ ಡಾ||ಸಿ. ಅಶ್ವಥ್ ರವರ ಜೀವನದ ಸುಮಧುರ ಘಳಿಗೆಗಳ ನೆನಪಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಶ್ವದಾಖಲೆಯ ಕಾರ್ಯಕ್ರಮ "ಕನ್ನಡವೇ ಸತ್ಯ-ಅಶ್ವಥ್ ನಿತ್ಯ" ದ ನಂತರ ಮತ್ತೊಂದು ಮಹತ್ವಪೂರ್ಣ ಮೈಲಿಗಲ್ಲಾಗಬಹುದಾದ ಈ ಕಾರ್ಯಕ್ರಮವು ಕನ್ನಡ ನಾಡು ಕಂಡ ಮಹಾನ್ ವ್ಯಕ್ತಿಗಳಿಗೆ ಸಮಸ್ತ ಕನ್ನಡಿಗರ ಪರವಾಗಿ ಸಲ್ಲಿಸಲಿರುವ ಅಭೂತಪೂರ್ವ ಗೌರವದ ನಮನವೂ ಹೌದು. ಇದು ನಮ್ಮ ಕಾರ್ಯಕ್ರಮ.ನಿಮ್ಮ ಕಾರ್ಯಕ್ರಮ, ಇದು ನಮ್ಮ-ನಿಮ್ಮೆಲ್ಲರ ಕಾರ್ಯಕ್ರಮ. ಇದೊಂದು ಕನ್ನಡ ಸಾಹಿತ್ಯ ಜಾತ್ರೆ, ಕನ್ನಡಸಂಸ್ಕೃತಿಯ ಜಾತ್ರೆ. ಕನ್ನಡ ಸಂಗೀತ ಜಾತ್ರೆ. ತಾಯಿ ಭುವನೇಶ್ವರಿಯ ಹೆಮ್ಮೆಯ ಪುತ್ರರ, ಕನ್ನಡದ ಕಣ್ಮಣಿಗಳ ಸ್ಮರಣೆಯ ಈ ಕಾರ್ಯಕ್ರಮಕ್ಕೆ ಎಲ್ಲಾ ಕನ್ನಡಾಭಿಮಾನಿಗಳೂ ಕೈ ಜೋಡಿಸೋಣ, ಕನ್ನಡದ ತೇರ ಎಳೆಯೋಣ.
|